ಚಿದಾನಂದಮೂರ್ತಿ ಮಠದ, ಅವರು ಕರ್ನಾಟಕದ ಹಿರಿಯ ವಿದ್ವಾಂಸರಲ್ಲಿ
ಒಬ್ಬರು. ಅವರು ಭಾಷಾಶಾಸ್ತ್ರ, ಶಾಸನ ವ್ಯಾಸಂಗ, ಸಂಸ್ಕೃತಿ ಚರಿತ್ರೆ, ಛಂದಸ್ಸು, ಗ್ರಂಥಸಂಪಾದನೆ,
ಜಾನಪದ ಅಧ್ಯಯನ, ಕನ್ನಡ ಸಾಹಿತ್ಯಚರಿತ್ರೆ ಮುಂತಾದ ಹಲವು ಜ್ಞಾನಶಿಸ್ತುಗಳಲ್ಲಿ ಮಹತ್ವದ ಕೊಡುಗೆಯನ್ನು
ನೀಡಿದ್ದಾರೆ. ಕಳೆದ ಕೆಲವು ದಶಕಗಳಿಂದ ಕನ್ನಡ ಭಾಷಾಚಳುವಳಿಯ ಮುಂಚೂಣಿಯಲ್ಲಿರುವ ಚಿದಾನಂದಮೂರ್ತಿಯವರು
ನಾಡಿನ ಸಾಮಾಜಿಕ ಹಾಗೂ ರಾಜಕೀಯ ವಾಸ್ತವಗಳನ್ನು ಕುರಿತಂತೆಯೂ ತೀವ್ರವಾದ ಆಸಕ್ತಿಯನ್ನು ತೋರಿಸಿದ್ದಾರೆ.
ದಾವಣಗೆರೆ ಜಿಲ್ಲೆಯಲ್ಲಿರುವ, ಚೆನ್ನಗಿರಿ ತಾಲ್ಲೂಕಿನ ಹಿರೇಕೋಗಲೂರು
ಗ್ರಾಮದಲ್ಲಿ ಮೂರ್ತಿಯವರು ಹುಟ್ಟಿದರು. ವ್ಯಾಸಂಗದಲ್ಲಿ ಅಪಾರ ಪ್ರತಿಭೆಯನ್ನು ತೋರಿಸಿದ ಅವರು, ಮೈಸೂರು
ವಿಶ್ವವಿದ್ಯಾಲಯದ ಬಿ.ಎ. ಮತ್ತು ಎಂ.ಎ. (ಕನ್ನಡ) ಪದವಿಗಳನ್ನು ಪಡೆದರು. ಅವರು, ‘ಕನ್ನಡ
ಶಾಸನಗಳ ಸಾಂಸ್ಕೃತಿಕ ಅಧ್ಯಯನ’ ಎಂಬ ಮಹಾಪ್ರಬಂಧಕ್ಕಾಗಿ
ಪಿಎಚ್.ಡಿ. ಪದವಿಯನ್ನು ಪಡೆದರು. ಇದು, ಇಂದಿಗೂ ಕನ್ನಡ ಅತ್ಯುತ್ತಮ ಡಾಕ್ಟರೇಟ್ ಪ್ರಬಂಧಗಳಲ್ಲಿ ಒಂದು.
ಇದರಲ್ಲಿ ಕ್ರಿ.ಶ. 450 ರಿಂದ ಕ್ರಿ.ಶ. 1150 ರವರೆಗಿನ ಶಾಸನಗಳ ವ್ಯವಸ್ಥಿತವಾದ ಅಧ್ಯಯನವಿದೆ. ಆ
ಕಾಲಮಾನದಲ್ಲಿ ಆಚರಣೆಯಲ್ಲಿದ್ದ ಅನೇಕ ಸಾಂಸ್ಕೃತಿಕ ಆಚರಣೆಗಳ ಮೇಲೆ, ಈ ಕೃತಿಯು ಬೆಳಕು ಚೆಲ್ಲುತ್ತದೆ.
ಕೆಲವು ವರ್ಷಗಳವರೆಗೆ, ಬೇರೆ ಬೇರೆ ಕಾಲೇಜುಗಳಲ್ಲಿ ಅಧ್ಯಾಪಕರಾಗಿ
ಕೆಲಸ ಮಾಡಿದ ನಂತರ, ಅವರು 1960ರಲ್ಲಿ ಮೈಸೂರು ವಿಶ್ವವಿದ್ಯಾಲಯದ ಕನ್ನಡ ಅಧ್ಯಯನಸಂಸ್ಥೆಯನ್ನು ಸೇರಿದರು.
ಆಮೇಲೆ, ಅವರು 1968 ರಲ್ಲಿ ಬೆಂಗಳೂರು ವಿಶ್ವವಿದ್ಯಾಲಯದಲ್ಲಿ ಕನ್ನಡ ರೀಡರ್ ಆಗಿ ನೇಮಕಗೊಂಡರು. 1990
ರಲ್ಲಿ ಕನ್ನಡ ಪ್ರಾಧ್ಯಾಪಕರ ಹುದ್ದೆಯಿಂದ ಸ್ವಯಂನಿವೃತ್ತಿಯನ್ನು ಪಡೆಯುವ ತನಕ, ಅವರು ಅಲ್ಲಿಯೇ ಸೇವೆ
ಸಲ್ಲಿಸಿದರು. 1967-68 ರಲ್ಲಿ ಚಿಕಾಗೋ ವಿಶ್ವವಿದ್ಯಾಲಯದಲ್ಲಿ ಸಂದರ್ಶಕ ಪ್ರಾಧ್ಯಾಪಕರಾಗಿದ್ದ ಮೂರ್ತಿಯವರು,
ಅಮೆರಿಕಾದ ಪ್ರಸಿದ್ಧ ವಿಶ್ವವಿದ್ಯಾಲಯಗಳಾದ ಬರ್ಕ್ಲಿ, ಸ್ಟಾನ್ ಫರ್ಡ್ ಮುಂತಾದ ಕಡೆ ನಡೆದ ವಿಚಾರಸಂಕಿರಣಗಳಲ್ಲಿ,
ಪ್ರಬಂಧಮಂಡನೆ ಮಾಡಿದ್ದಾರೆ.
ವಿದ್ವತ್ತಿನ ಹಲವು ವಲಯಗಳಲ್ಲಿ, ಅವರು ಮಾಡಿರುವ ಸಂಶೋಧನೆಯು
ಹೊಸ ಹಾದಿಗಳನ್ನು ಹಾಕಿಕೊಟ್ಟಿದೆ, ಹೊಸ ಅಧ್ಯಯನವಿಧಾನಗಳನ್ನು ರೂಪಿಸಿಕೊಟ್ಟಿದೆ. ಸಾಹಿತ್ಯಕ ಸಂಶೋಧನೆಯನ್ನು,
ಕೇವಲ ಸಾಹಿತ್ಯಕವಾದ ಸಂಕುಚಿತ ನೆಲೆಗಳಿಂದ ಬಿಡಿಸಿ, ಅದಕ್ಕೆ ಸಾಮಾಜಿಕ ಹಾಗೂ ಸಾಂಸ್ಕೃತಿಕ ಆಯಾಮಗಳನ್ನು
ಜೋಡಿಸಿದ ಕೆಲವು ವಿದ್ವಾಂಸರಲ್ಲಿ ಮೂರ್ತಿಯವರೂ ಒಬ್ಬರು. ಸಾಹಿತ್ಯ ಮತ್ತು ಸಂಸ್ಕೃತಿಗಳನ್ನು ಒಳಗೊಳ್ಳುವ
ಅಂತರ್ಶಿಸ್ತೀಯ ಅಧ್ಯಯನವನ್ನು ಬಳಸಿಕೊಂಡ ಮೊದಲಿಗರ ಸಾಲಿಗೆ ಅವರು ಸೇರುತ್ತಾರೆ. ಸಂಪೂರ್ಣ ಸೂರ್ಯಗ್ರಹಣ,
ಲಂಬಾಣಿಗಳ ಭಾಷೆ ಮತ್ತು ಸಂಸ್ಕೃತಿ, ಗ್ರಾಮೀಣ ಕರ್ನಾಟಕದ ಧಾರ್ಮಿಕ ಆಚರಣೆಗಳು ಮುಂತಾದ ಅಪರೂಪದ ವಿಷಯಗಳ
ಬಗ್ಗೆ ಅವರು ಆಸಕ್ತಿ ತೋರಿಸಿ ಸಂಶೋಧನೆ ಮಾಡಿದ್ದಾರೆ. ಕೇವಲ ಸಾಹಿತಿಗಳು ಮತ್ತು ಅವರ ಕೃತಿಗಳನ್ನು
ಕುರಿತ ಅಧ್ಯಯನದ ಚೌಕಟ್ಟು ಅವರಿಗೆ ಇಷ್ಟವಾಗಲಿಲ್ಲ. ಹಲವು ಆಚರಣೆಗಳು ಮತ್ತು ವಿಧಿಕ್ರಿಯೆಗಳನ್ನು(ರಿಚುಯಲ್ಸ್)
ಅವರು ವಿಶ್ಲೇಷಣೆ ಮಾಡಿದ್ದಾರೆ.
ಚಿದಾನಂದಮೂರ್ತಿಯವರು ಮೂವತ್ತಕ್ಕೂ ಹೆಚ್ಚು ಗ್ರಂಥಗಳನ್ನು ರಚಿಸಿದ್ದಾರೆ.
ಅವರು ಕನ್ನಡ ಮತ್ತು ಇಂಗ್ಲಿಷ್ ಗಳಲ್ಲಿ ಸುಮಾರು 400 ಸಂಶೋಧನ ಪ್ರಬಂಧಗಳನ್ನು ಬರೆದಿದ್ದಾರೆ. ಅವರ
ಕೆಲವು ಮುಖ್ಯ ಕೃತಿಗಳನ್ನು ಇಲ್ಲಿ ಪಟ್ಟಿ ಮಾಡಲಾಗಿದೆ:
1
|
ಶೂನ್ಯಸಂಪಾದನೆಯನ್ನು ಕುರಿತು
|
1962
|
2
|
ಭಾಷಾವಿಜ್ಞಾನದ ಮೂಲತತ್ವಗಳು
|
1965
|
3
|
ಸಂಶೋಧನತರಂಗ-1
|
1966
|
4
|
ಸಂಶೋಧನತರಂಗ-2
|
5
|
ಕವಿರಾಜಮಾರ್ಗ
|
1973
|
6
|
ವಾಗರ್ಥ
|
1981
|
7
|
ಗ್ರಾಮೀಣ
|
1977
|
8
|
ವಚನ ಸಾಹಿತ್ಯ
|
1975
|
9
|
ಹೊಸತು ಹೊಸತು
|
1993
|
10
|
ಲಿಂಗಾಯತ
ಅಧ್ಯಯನಗಳು
|
1986
|
11
|
ಛಂದೋತರಂಗ
|
1993
|
12
|
ಮಧ್ಯಕಾಲೀನ ಕನ್ನಡ ಸಾಹಿತ್ಯ ಮತ್ತು ಅಸ್ಪೃಶ್ಯತೆ
|
1985
|
13
|
ಸಂಪೂರ್ಣ ಸೂರ್ಯಗ್ರಹಣ
|
1982
|
14
|
ಕನ್ನಡಾಯಣ
|
1999
|
15
|
ಕನ್ನಡ ಸಂಸ್ಕೃತಿ- ನಮ್ಮ
ಹೆಮ್ಮೆ
|
1987
|
16
|
ವಚನಶೋಧ
|
1994
|
17
|
ಕನ್ನಡ ಶಾಸನಗಳ ಸಾಂಸ್ಕೃತಿಕ ಅಧ್ಯಯನ
|
1966
|
18
|
Basavanna
|
1972
|
19
|
ಬಸವಣ್ಣನವರು
|
1967
|
20
|
ಕರ್ನಾಟಕ-ನೇಪಾಳ
|
2003
|
21
|
ವೀರಶೈವ ಧರ್ಮ,
ಭಾರತೀಯ ಸಂಸ್ಕೃತಿ
|
2000
|
22
|
ಪಾಂಡಿತ್ಯರಸ
|
2000
|
23
|
ಸಂಶೋಧನೆ
|
1967
|
ಕಳೆದ ಮೂರು ದಶಕಗಳಿಂದ ಕನ್ನಡ ಭಾಷಾ ಚಳುವಳಿಯ ಅವಿಭಾಜ್ಯ ಅಂಗವಾಗಿರುವ
ಚಿದಾನಂದಮೂರ್ತಿಯವರು ಕನ್ನಡ ಮತ್ತು ಕರ್ನಾಟಕದ ಹಿತಾಸಕ್ತಿಗಳನ್ನು ಕಾಪಾಡಲು ತಮ್ಮದೇ ಆದ ರೀತಿಯಲ್ಲಿ
ಹೋರಾಡಿದ್ದಾರೆ. ಅವರು ಬೆಂಗಳೂರಿನಿಂದ ಹಂಪಿಯವರೆಗೆ ನಡೆಸಿದ ಕಾಲುನಡಿಗೆಯ ಪಯಣದ ನಿರೂಪಣೆಯಾದ
‘ಕನ್ನಡಾಯಣ’
ಅವರ ಕಾಳಜಿಗಳಿಗೆ ಕನ್ನಡಿ ಹಿಡಿಯುತ್ತದೆ.
ಚಿದಾನಂದಮೂರ್ತಿಯವರು ಹಲವಾರು ಪ್ರಶಸ್ತಿಗಳನ್ನು ಗೌರವಗಳನ್ನು
ಪಡೆದಿದ್ದಾರೆ. ಹೊಸತು ಹೊಸತು ಕೃತಿಗೆ ಕೇಂದ್ರ ಸಾಹಿತ್ಯ ಅಕಾಡೆಮಿ ಪ್ರಶಸ್ತಿ,(1997) ರಾಜ್ಯೋತ್ಸವ
ಪ್ರಶಸ್ತಿ,(1985) ಪಂಪ ಪ್ರಶಸ್ತಿ, (2002) ಕರ್ನಾಟಕ ಸಾಹಿತ್ಯ ಅಕಾಡೆಮಿ ಪ್ರಶಸ್ತಿ,(1984) ಜನಪದ
ಮತ್ತು ಯಕ್ಷಗಾನ ಅಕಾಡೆಮಿ ಪ್ರಶಸ್ತಿಗಳು ಅವುಗಳಲ್ಲಿ ಮುಖ್ಯವಾದವು. ‘ಸಂಶೋಧನ’ ಅವರಿಗೆ ಸಮರ್ಪಿತವಾಗಿರುವ ಅಭಿನಂದನ ಗ್ರಂಥ.
|